Sunday, 20 December 2009

ರೊಟ್ಟಿ ತಟ್ಟುವ ಸಂಭ್ರಮ


ರೊಟ್ಟಿ ತಟ್ಟುವ ಸಂಭ್ರಮ
ಅಕ್ಷರ ಕಾವ್ಯ : ಡಾ. ಕೆ. ಎನ್. ದೊಡ್ಡಮನಿ , ಬೆಳಗಾವಿ .

ಒಂದು ಕಾಲು ಇತ್ತು:
ಕಾರಜ್ವಾಳ - ಬಿಳಿಜ್ವಾಳ ಭಯಂಕರ ಸುಗ್ಗಿ 
ಬೆಳ್ಳಿಚುಕ್ಕಿ ಮೂಡಿ ಬೆಳಕ ಹರಿಯೊದ್ರೊಳಗ
ಕಲ್ಲಿನ ನಾದನ್ಯಾಗ ಹಾಡಿನ ಸೊಲ್ಲ ಬೆರಸಿ
ಸಿಗಾರೇರಿ ಬೀಸಿದ ಹಿಟ್ಟನಾದಿ, ರುಬ್ಬಿ
ರೊಟ್ಟಿ ಮಾಡ್ತಿದ್ದರು ನಮ್ಮವ್ವ ,
ಚಿಗವ್ವ ಎಲ್ಲರೂ ಒಲಿಮ್ಯಾಲ.

ಹಸಿಬಿಸಿ ಶೆಗಣಿ ಕುಳ್ಳ
ಹಾದಿಬೀದಿ ಮ್ಯಾಲಿನ ಕಳ್ಳಿಕಟ್ಟಿಗಿ 
ಕರಿ ನೆಲದಾಗ ಕಿತ್ತಿಬಿದ್ದ ಖ್ವಾಡವಿ ಆರಸಿ
ಬಾಜು ಮನ್ಯಾಗಿನ ಬೆಂಕಿಲೆ ಒಲಿ ಹೊತ್ತಿಸಿ
ಬಡದ ರೊಟ್ಟಿ ಮಾಡ್ತಿದ್ದರು,
ಇಡೀ ಓಣಿಗೇ ಕೇಳುಹಾಂಗ .

ಅಡುಗಿ ಮನ್ಯಾಗ
ಮೈಮುರ್ಕೊಂಡ ಬಿದ್ದ ಕತ್ಲ್ಯಾಗ
ಉಸರಗಟ್ಟಿ ಸಾಯೋ ಹೊಗಿಯೊಳಗs
ಒಲ್ಯಾಗ ಮಾರಿಹಾಕಿ
ಊದಿ ಉರಿ ಮಾಡಿ
ರೊಟ್ಟಿ ಬೇಸತ್ತಿದ್ದಳು ನಮ್ಮವ್ವ

ತವ್ಯಾಗ ಉಬ್ಬಿದ ರೊಟ್ಟಿ ನೋಡಿ ನಾವೂ s
ಕುಣದ ಕುಪ್ಪಳಿಸಿ 
ಹಸದ ಹಲ್ಲಕಿಸದ
ಅವ್ವಕೊಟ್ಟ ಅದs ಬಿಸಿರೊಟ್ಟಿ 
ಕೈಸುಟ್ಕೊಂತ ಅಂಗಳದಾಗ
ಹಾಸಿದ ಬೆಳದಿಂಗಳನ್ಯಾಗ
ಹಾಡ್ಯಾಡಿ ತಿಂದ
ಅಲ್ಲೇ ನಿದ್ದಿ ಹೋಗತಿದ್ವಿ .

ಮಾರ್ಡನ್ ಹಾಡ ಹಾಡ್ಕೊಂತs
ಈಗ ನನ್ನ ಹೆಂಡ್ತಿನೂs
ರೊಟ್ಟಿ ಮಾಡ್ತಾಳ
ಕಿಚನ ರೂಮನ್ಯಾಗ ನಿಂತ-
ನಡಮಟ ಕಟ್ಟಿದ ಕಟ್ಟಿಮ್ಯಾಲ
ಗ್ಯಾಸ ಸಿಲೆಂಡರ ಒಲಿಹೊತ್ತಿಸಿ
ಹಾಂ ಅನ್ನೊದಕs ರೊಟ್ಟಿರೆಡಿ!

ಆದರ,
ನಮ್ಮವ್ವನ ರೊಟ್ಟಿಹಾಂಗ ಹೆಂಡ್ತಿ ರೊಟ್ಟಿ
ತವ್ಯಾಗ ಉಬ್ಬಿ ನಿಲ್ಲಾಂಗಿಲ್ಲ
ಎತ್ತಿಹಿಡದರ ಕೈಯಾಗೂs ನಿಲ್ಲಾಂಗಿಲ್ಲ.

ಹಿಂಗ್ಯಾಕs ನಿನ್ನ ರೊಟ್ಟಿ?
ಅಂತ ಹೆಂಡ್ತಿನ ಕೇಳಿದರ:
ಅವಹಂಗ!
ಹೈಬ್ರಿಡಜ್ವಾಳ ರೊಟ್ಟಿ ಅಂತಾಳ!!